ಔರಸತ್ವ ಮತ್ತು ಔರಸೀಕರಣ: ಒಂದು ಮಗುವಿನ ಜನನ ಸಮಯದಲ್ಲಿ ಅದರ ತಂದೆತಾಯಿಯರು ನ್ಯಾಯಬದ್ದವಾಗಿ ವಿವಾಹವಾಗಿದ್ದ ಪಕ್ಷದಲ್ಲಿ ಈ ರೀತಿ ಪ್ರಾಪ್ತವಾದ ಸಂತಾನವನ್ನು ಔರಸ ಸಂತಾನವೆಂದು ಕರೆಯಲಾಗುತ್ತದೆ. ಈ ಗುಣ ಅಥವಾ ಕಾನೂನುಬದ್ಧ ಸ್ಥಿತಿಯೇ ಔರಸತ್ವ (ಲೆಜಿಟಿಮಿಸಿ). ಜಾರಸ ಅಥವಾ ಅನೌರಸ ಸಂತಾನವನ್ನು ಔರಸ ಅಥವಾ ಧರ್ಮಸಂತಾನವೆಂದು ಪರಿವರ್ತನೆ ಮಾಡುವ ಕ್ರಮವೇ ಔರಸೀಕರಣ (ಲೆಜಿಟಿಮೇಷನ್).

ವಿವಾಹ ಬಂಧನದ ಹೊರಗೆ-ಎಂದರೆ ಅಧರ್ಮ ಅಥವಾ ಅನೀತಿಯ ಸಂಬಂಧದಿಂದ-ಹುಟ್ಟಿದ ಮಗು ಜಾರಜ ಅಥವಾ ಅನೌರಸ ಸಂತಾನ (ನೋಡಿ- ಜಾರಜ). ಅದು ಮದುವೆಯಾಗದ ಹೆಂಗಸಿನ ಅಥವಾ ಗಂಡಸಿನ ಮಗುವಾಗಿರಬಹುದು; ಹೆಂಗಸು (ಗಂಡಸು) ಮದುವೆಯಾಗಿದ್ದರೂ ಗಂಡನಿಲ್ಲದೆ (ಹೆಂಡತಿಯಲ್ಲದೆ) ಬೇರೆಯವರ ಸಂಪರ್ಕದಿಂದ ಹುಟ್ಟಿದ ಮಗುವಾಗಿರಬಹುದು.
ಧರ್ಮ ಅಥವಾ ನ್ಯಾಯದೃಷ್ಟಿಯಿಂದ ಎಲ್ಲ ಸಂತಾನವೂ ಔರಸ ಸಂತಾನವೆಂದೇ ಪರಿಗಣಿಸುವ ಧೋರಣೆಯನ್ನು ಎಲ್ಲ ಸುಶಿಕ್ಷಿತ ರಾಷ್ಟ್ರಗಳೂ ಅನುಸರಿಸುತ್ತಿವೆ. ಎಲ್ಲ ಸಂತಾನವೂ ಧರ್ಮೋತ್ಪನ್ನವೆಂದು ವ್ಯಾವಹಾರಿಕವಾಗಿ ಹೇಳಲು ಸಾಧ್ಯವಾದರೆ ಅದನ್ನು ಧರ್ಮಸಂತಾನವೆಂದು ಪರಿಗಣಿಸಬೇಕೆಂದು ಕಾನೂನಿನ ಧೋರಣೆ. ಯಾವುದೇ ಮಗು ಅನೌರಸ ಅಥವಾ ಅಧರ್ಮಸಂತಾನವೆಂದು ಸ್ಥಿರಪಡದಿದ್ದರೆ ಅಂಥ ಮಗು ಔರಸ ಅಥವಾ ಧರ್ಮಸಂತಾನವೆಂದೇ ಪರಿಗಣಿಸಲ್ಪಡಬೇಕಾಗುತ್ತದೆ.

ಯಾವುದೇ ಮದುವೆಯ ಸಮಾರಂಭ ಆದದ್ದರ ಬಗ್ಗೆ ಸಾಕ್ಷ್ಯ ದೊರೆತರೆ ಆ ಮದುವೆ ನ್ಯಾಯಬದ್ಧವಾಗಿದೆಯೆಂದು ಪ್ರಥಮತಃ ಗ್ರಹಿಸಬೇಕು. ಈ ಬಗೆಯ ಗ್ರಹಿಕೆಯ ವಿರುದ್ಧ ಯಾವುದೂ ನಿರ್ಣಾಯಕ ಸಾಕ್ಷ್ಯ ಇಲ್ಲದಿದ್ದಲ್ಲಿ ಈ ಗ್ರಹಿಕೆಯನ್ನು ಸ್ಥಿರವೆಂದು ಪರಿಗಣಿಸಲಾಗುವುದು.
ವಿವಾಹದ ಅನಂತರ ದಂಪತಿಗಳಿಗೆ ಜನಿಸಿದ ಸಂತತಿ ಧರ್ಮಸಂತತಿಯೆಂದು ಕಾಯಿದೆ ಪರಿಗಣಿಸುತ್ತದೆ. ಗರ್ಭದಾರಣೆಯ ಕಾಲಕ್ಕೆ ಗಂಡನ ಸಂಪರ್ಕ ವ್ಯಾವಹಾರಿಕವಾಗಿ ಸಾಧ್ಯವಾಗಿರದಿದ್ದರೂ ಅಂಥ ಸಂತಾನ ಧರ್ಮಸಂತಾನವೆಂದೇ ಅಂಗೀಕರಿಸಬೇಕೆಂಬ ಅಭಿಮತವಿದೆ. ಅಲ್ಲದೆ ಗರ್ಭಧಾರಣೆ ಹೆಂಡತಿಯ ದುಶ್ಯೀಲದ ಫಲವಿರಬುಹುದೆಂಬ ಸಂಶಯವಿದ್ದರೂ ಆ ಮಗು ಧರ್ಮಸಂತಾನವೆಂದೇ ತಿಳಿಯಬೇಕಾಗುತ್ತದೆ. ವೈವಾಹಿಕ ಸಂಬಂಧ ಕಡಿಯಲ್ಪಡದಿರುವಾಗ ಅಥವಾ ಕೊನೆಗೊಳ್ಳದಿರುವಾಗ ಜನ್ಮತಾಳಿದ ಸಂತತಿಯನ್ನು ಧರ್ಮಸಂತತಿಯೆಂದೇ ಪರಿಗಣಿಸಲಾಗುವುದು ಎಂಬ ನಿರ್ಧಾರ ನಿರ್ಣಯಾತ್ಮಕವಲ್ಲ. ಹೀಗೆ ಮಾಡುವ ನಿರ್ಧಾರ ತಪ್ಪೆಂದು ತೋರಿಸಲು ಭಾರತೀಯ ಸಾಕ್ಷ್ಯ ಕಾಯಿದೆಯ 112 ಹಾಗೂ 114ನೆಯ ಕಲಮುಗಳ ಪ್ರಕಾರ ಅವಕಾಶವಿದೆ. ಅನೀತಿಯ ಮದುವೆಯಿಂದ ಉತ್ಪನ್ನವಾದ ಸಂತತಿ ಪಾಶ್ಚಾತ್ಯ ದೇಶಗಳ ಕಾನೂನಿನ ಪ್ರಕಾರ ಅನೌರಸ ಅಥವಾ ಅಧರ್ಮದ್ದೆಂದು ತಿಳಿಯಲಾಗುವುದು. ಅಂಥ ಸಂತತಿಯನ್ನು ಕಾನೂನಿನ ಆಧಾರದ ಮೇಲೆ ಔರಸೀಕರಣ ಅಥವಾ ಧರ್ಮಸಂತತಿಯೆಂದು ನಿರ್ಣಯಿಸಲು ಅವಕಾಶವಿದೆ. ರದ್ದು ಮಾಡಿಸಿಕೊಳ್ಳಬಹುದಾದಂಥ ಮದುವೆಯಿಂದ ಹುಟ್ಟಿದ ಸಂತತಿಯನ್ನು ಔರಸ ಅಥವಾ ಧರ್ಮಸಂತತಿಯೆಂದೇ ಗಣಿಸಲಾಗುತ್ತದೆ. ಆ ಮಗು ಹುಟ್ಟಿದ ಆನಂತರ ಆ ಮದುವೆ ರದ್ದಾದರೆ ಅಥವಾ ಆ ಮದುವೆ ಅನೀತಿಪರವೆಂದು ನಿರ್ಣಿತವಾದರೆ ಆ ಮಗು ಮಾತ್ರ ಔರಸಂತತಿಯೆಂದೇ ಪರಿಗಣಿತವಾಗುತ್ತದೆ. ಆ ಮಗುವಿನ ಗರ್ಭಧಾರಣೆಯ ಕಾಲಕ್ಕಿದ್ದ ಅದರ ತಂದೆತಾಯಿಗಳ ಸಂಬಂಧದ ಸ್ವರೂಪದ ಆಧಾರದ ಮೇಲೆ ಮಗು ಧರ್ಮಸಂತತಿಯೋ ಅಥವಾ ಅಧರ್ಮಸಂತತಿಯೋ ಎಂಬುದರ ನಿರ್ಣಯವಾಗುತ್ತದೆ. ಎಂದರೆ ಎಲ್ಲ ಪಾಶ್ಚಾತ್ಯ ರಾಷ್ಟ್ರಗಳ ಕಾಯಿದೆಗಳೂ ಎಲ್ಲ ಸಂತಾನವೂ ಧರ್ಮಸಂತಾನವೆಂದು ಮನ್ನಿಸುವ ಧೋರಣೆಯನ್ನು ಅನುಸರಿಸಿದ್ದು, ಯಾವುದೇ ಸಂತಾನ ಅಧರ್ಮ ಅಥವಾ ಜಾರಜ ಸಂತಾನವೆಂದು ಶಾಶ್ವತವಾಗಿ ಪರಿಗಣಿಸುವ ಬಗ್ಗೆ ಸಮ್ಮತಿ ನೀಡುವ ಮನಃಪ್ರವೃತ್ತಿಯನ್ನು ಹೊಂದಿಲ್ಲ.

ಮದುವೆಗಳು ಅಧರ್ಮ ಅಥವಾ ಅನೀತಿಯೆಂದು ರದ್ದಾಗಲು ಅನೇಕ ಕಾರಣಗಳಿವೆ. ಮದುವೆಯ ಕಾಲಕ್ಕೆ ಮೊದಲಿನ ಗಂಡ ಅಥವಾ ಹೆಂಡತಿ ಜೀವಂತವಾಗಿದ್ದು ಹಾಗೆ ಜೀವಂತವಿಲ್ಲವೆಂದು ನೆರೆನಂಬಿ ಮದುವೆಯಾಗಿದ್ದರೆ ಆ ಸಂಬಂಧದಿಂದ ಹುಟ್ಟಿದ ಮಗುವನ್ನು ಔರಸ ಅಥವಾ ಧರ್ಮಸಂತಾನವೆಂದು ತಿಳಿಯಬೇಕೆಂದು ಕೆಲವು ರಾಷ್ಟ್ರಗಳ ಕಾನೂನುಗಳು ಹೇಳುತ್ತವೆ. ಮೊದಲನೆಯ ಮದುವೆ ಮುಕ್ತಾಯವಾಗಿದೆ ಅಥವಾ ರದ್ದಾಗಿದೆ ಎಂದು ಭಾವಿಸಿ, ಇಲ್ಲವೆ ಮೊದಲನೆಯ ಮದುವೆಯಾಗಿರುವ ಬಗ್ಗೆ ತಿಳಿವಳಿಕೆಯೇ ಇಲ್ಲದಿದ್ದಾಗ ಮದುವೆಯಾಗಿ ಆ ಮದುವೆಯ ಸಂಬಂಧದಿಂದ ಮಗು ಹುಟ್ಟಿದರೆ ಮುಂದೆ ಈ ಮದುವೆ ರದ್ದಾದರೂ ಆ ಮಗು ಮಾತ್ರ ಔರಸ ಅಥವಾ ಧರ್ಮಸಂತಾನವೆಂದೇ ತಿಳಿಯಬೇಕೆಂದು ಕೆಲವು ರಾಷ್ಟ್ರಗಳ ಕಾನೂನುಗಳು ಹೇಳುತ್ತವೆ. ಮಗುವಿನ ತಾಯಿ ಆ ಮಗುವಿನ ತಂದೆಯಾದ ಗಂಡನಿಂದ ಬಿಡುಗಡೆ ಪಡೆಯದೆ, ಮದುವೆಯನ್ನು ರದ್ದುಪಡಿಸಿಕೊಳ್ಳದೆ, ಮತ್ತೊಬ್ಬನನ್ನು ಮದುವೆಯಾದರೆ ಅಂಥ ಮಗುವನ್ನು ಜಾರಜ ಅಥವಾ ಅಧರ್ಮಸಂತಾನವೆಂದು ಪರಿಗಣಿಸಲಾಗದು. 

ಒಂದು ಸಲ ಆದ ಮದುವೆ ಮುಂದೆ ರದ್ದಾದರೆ ಹಾಗೆ ರದ್ದಾಗುವುದಕ್ಕೆ ಮುಂಚೆ ಹುಟ್ಟಿದ ಮಗು ಜಾರಜನೆಂದಾಗುವುದಿಲ್ಲ. ಮದುವೆಯನ್ನು ರದ್ದುಪಡಿಸುವ ನಿರ್ಣಯದಿಂದ ಆ ಮಗುವಿನ ಔರಸತ್ವವನ್ನು ಅಥವಾ ಧರ್ಮಜನನವನ್ನು ಅಲ್ಲಗಳೆಯಲಾಗುವುದಿಲ್ಲ. ಇಂಥ ನಿರ್ಣಯದಲ್ಲಿ ಆ ಮಗುವಿನ ಔರಸತ್ವವನ್ನು ಮನ್ನಿಸಿ ಅದರ ಸ್ಥಾನವನ್ನು ರಕ್ಷಿಸುವಂತೆ ನಿರ್ದೇಶಿಸಿ ಮದುವೆಯನ್ನು ರದ್ದುಪಡಿಸುವುದಕ್ಕೆ ಅವಕಾಶವಿದೆ. ಮದುವೆ ಆದ ಅತ್ಯಲ್ಪಕಾಲದಲ್ಲಿ ಮಗುವಿನ ಜನ್ಮವಾದರೆ ಅದು ವಿವಾಹಪುರ್ವದ ಸಂಬಂಧದಿಂದ ಹುಟ್ಟಿದುದು ಎಂದು ಖಚಿತವಾಗಿದ್ದರೂ ಮಗು ಹುಟ್ಟಿದಾಗ ಆ ತಾಯಿಯ ಮದುವೆಯಾಗಿರುವುದರಿಂದ ಆ ಮಗುವನ್ನು ಔರಸ ಅಥವಾ ಧರ್ಮಸಂತಾನವೆಂದೇ ಪರಿಗಣಿಸಲಾಗುವುದು. ಈ ಔರಸತ್ವದ ಬಗ್ಗೆ ಮಾಡುವ ಪ್ರಥಮ ನಿರ್ಧಾರ ನಿರ್ಣಾಯಕವೆಂದು ತಿಳಿಯದಕ್ಕದ್ದಲ್ಲ. ಈ ಗ್ರಹಿಕೆಯನ್ನು ಅಲ್ಲಗಳೆಯುವಾಗ ಗಂಡ ಷಂಡನೆಂದು ಅಥವಾ ತಾಯಿಯಾದ ಹೆಂಡತಿಯ ಸಂಗಡ ಆತನ ಸಂಪರ್ಕವಿದ್ದಿಲ್ಲವೆಂದು ಇಲ್ಲವೇ ವಿವಾಹಪುರ್ವದಲ್ಲಿ ಗಂಡ ಹೆಂಡತಿಯೊಡನೆ ಸುರಸಂಬಂಧವನ್ನಿಟ್ಟರಲಿಲ್ಲವೆಂದು ತೋರಿಸಲು ಅವಕಾಶವಿದೆ. 

ಬಹಳ ಕಾಲದವರೆಗೆ ಔರಸತ್ವವನ್ನು ಅನುಮೋದಿಸುವುದರಿಂದ ಅಥವಾ ಬಹಳ ಕಾಲದವರೆಗೆ ಅದನ್ನು ವಿರೋಧಿಸಿಲ್ಲವೆಂಬ ಕಾರಣದಿಂದ ಔರಸತ್ವಪ್ರತಿಪಾದನೆಗೆ ಬಲ ಬರುತ್ತದೆ. ಸಂಬಂಧಪಟ್ಟ ದಂಪತಿಗಳು ಸತ್ತುಹೋಗಿದ್ದರೆ ಈ ನಿರ್ಧಾರ ವಿಶೇಷವಾಗಿ ಸತ್ಯವೆಂದು ಕಂಡುಬರುವುದು ಮತ್ತು ಇಂಥ ಸಂದರ್ಭಗಳಲ್ಲಿ ಅನೌರಸತ್ವದ ಗ್ರಹಿಕೆ ಉಳಿಯುವುದಿಲ್ಲ.

ತಾಯಿಯಲ್ಲದ ಬೇರೆ ಹೆಂಗಸಿನ ಪೋಷಣೆಯಲ್ಲಿ ಮಗು ಇದ್ದುದು ಕಂಡುಬಂದರೂ ಅದು ಆ ಮಗುವಿನ ಪೋಷಣೆ ಮಾಡುವ ಹೆಂಗಸಿನ ಹಾಗೂ ಅವಳ ಗಂಡನ ಸಂಯೋಗದಿಂದ ಹುಟ್ಟಿದ ಮಗುವೆಂದು ಗ್ರಹಿಸಲು ಸಾಧ್ಯವಿಲ್ಲ.

ಮೇಲಿನ ತತ್ತ್ವಗಳು ಪಾಶ್ಚಾತ್ಯ ದೇಶಗಳಲ್ಲಿ ಅನುಸರಣೆಯಲ್ಲಿದ್ದು ಭಾರತದಲ್ಲಿಯೂ ಇತ್ತೀಚೆಗೆ ಕೆಲವು ಮಟ್ಟಿಗೆ ಇವನ್ನು ಅನುಸರಿಸಲಾಗಿದೆ. ಮದುವೆಯಾದ ಗಂಡಹೆಂಡಿರ ಪೈಕಿ ಒಬ್ಬರು ಬೇಡಿದ ಕಾರಣದಿಂದ ದಾಂಪತ್ಯಸಂಬಂಧ ಕೊನೆಗೊಂಡಿತೆಂದು ನಿರ್ಣಯವಾದರೂ ವೈವಾಹಿಕ ಸಂಬಂಧ ಉಳಿದಿದ್ದ ಕಾಲದಲ್ಲಿ ಹುಟ್ಟಿದ ಸಂತತಿ ಇಲ್ಲ ಉದ್ದಿಶ್ಯಗಳಿಗಾಗಿ ಆ ದಂಪತಿಗಳ ಔರಸ ಅಥವಾ ಧರ್ಮ ಸಂತಾನವೆಂದೇ 1955ರ ಹಿಂದೂ ವಿವಾಹ ಕಾಯಿದೆಯ 16ನೆಯ ಕಲಮಿನನ್ವಯ ಪರಿಗಣಿಸಲಾಗುವುದು. ಆದರೆ ಆ ಕಲಮಿನ ಅಪವಾದದ ಮೂಲಕ ಆ ಸಂತತಿ ತನ್ನ ತಂದೆತಾಯಿಯರ ಹೊರತು ಬೇರೆ ಯಾವುದೇ ವ್ಯಕ್ತಿಯ ಆಸ್ತಿಯಲ್ಲಿ ಹಿತ ಸಂಬಂಧವನ್ನು ಪಡೆಯುವ ಹಕ್ಕುಳ್ಳದ್ದಾಗುವುದಿಲ್ಲ. ಕೋರ್ಟಿನ ನಿರ್ಣಯವಿದ್ದರೂ ಈ ಪರಿಣಾಮ ಉಂಟಾಗುವುದಿಲ್ಲ. ರದ್ದಾಗಬಹುದಾದಂಥ ಮದುವೆಯನ್ನು ಅಲ್ಲಗಳೆಯುವ ಅಧಿಕಾರ ಆ ಮದುವೆಗೆ ಸಂಬಂಧಿಸಿದ ಇಬ್ಬರಿಗೂ ಇರುತ್ತದೆ. ಮದುವೆಗೆ ಸಂಬಂಧಪಟ್ಟ ಇಬ್ಬರೂ ಜೀವಂತವಿರುವವರೆಗೆ ಮಾತ್ರ ಆ ಮದುವೆಯನ್ನು ಅಲ್ಲಗಳೆಯುವ ಅಧಿಕಾರ ಯಾರೊಬ್ಬರಿಗೂ ಉಂಟಾಗಬಹುದು. ಈ ಇಬ್ಬರಲ್ಲಿ ಒಬ್ಬರು ಮರಣ ಹೊಂದಿದ ಆನಂತರ ಈ ಮದುವೆಯನ್ನು ಅಲ್ಲಗಳೆಯುವ ಅಧಿಕಾರ ಇನ್ನೊಬ್ಬರಿಗೂ ಉಳಿಯುವುದಿಲ್ಲ. ಅಂಥ ಮದುವೆಯಿಂದ ಉಂಟಾದ ಸಂತಾನ ಔರಸ ಅಥವಾ ಧರ್ಮಸಂತಾನವೆಂದೇ ಪರಿಗಣಿಸಲ್ಪಟ್ಟು ಆ ಪ್ರಕಾರ ರಕ್ಷಿಸಲ್ಪಡುತ್ತದೆ.

ಔರಸೀಕರಣ: ಒಮ್ಮೆ ಅನೌರಸವಾಗಿ ಪಡೆದ ಸಂತಾನದ ತಂದೆ ತಾಯಿಯರು ಅನಂತರ ಪರಸ್ಪರ ಮದುವೆ ಮಾಡಿಕೊಂಡು ಅದನ್ನು ಔರಸಂತಾನವಾಗಿ ಪರಿವರ್ತಿಸುವುದು ಸಾಧ್ಯವಿಲ್ಲವೆಂಬುದು ಇಂಗ್ಲೆಂಡಿನ ಸಂಪ್ರದಾಯ ನ್ಯಾಯದ ಕಟ್ಟಳೆಯಾಗಿತ್ತು. ಅನೌರಸಸಂತಾನದ ಅವಿವಾಹಿತ ತಂದೆತಾಯಿಯರು ಮದುವೆಯಾದ ಕೂಡಲೇ ಆ ವಿವಾಹದ ಫಲವಾಗಿ ಆ ಸಂತಾನ ಔರಸವಾಗುತ್ತದೆಯೆಂಬುದಾಗಿ 1926ರಲ್ಲಿ ಕಾಯಿದೆಯಿಂದ ಸಿದ್ಧವಾಯಿತು. 1959ರ ಕಾಯಿದೆ ಇನ್ನೂ ಉದಾರವಾಗಿದೆ. ಮಗುವಿನ ತಂದೆ ಅಥವಾ ತಾಯಿ ಇನ್ನೊಂದು ವ್ಯಕ್ತಿಯೊಂದಿಗೆ ಮದುವೆಯಾಗಿದ್ದ ಪಕ್ಷದಲ್ಲಿ. ಅವರ ಪರಸ್ಪರ ಮುದುವೆಯಾದ ಕೂಡಲೇ ಆ ಮಗು ಔರಸ ಸಂತಾನವಾಗುತ್ತದೆಂದು ಅದರಲ್ಲಿ ಹೇಳಲಾಗಿದೆ. ವಿವಾಹ ಬಂಧನ ಕಾಲದಲ್ಲಿ ಮಗು ಹುಟ್ಟಿತೆಂಬುದೇ ಅದರ ಔರಸತ್ವ ಸ್ಥಾಪನೆಗೆ ಸಾಕಷ್ಟು ಕಾರಣವೆಂದು ಅಮೆರಿಕ ಸಂಯುಕ್ತಸಂಸ್ಥಾನದ ಕಾನೂನು ಸಾರುತ್ತದೆ. ಆದರೆ ತಂದೆಯ ನಪುಂಸಕತ್ವ, ಗರ್ಭಧಾರಣೆಯ ಕಾಲದಲ್ಲಿ ಆತನ ಸಂಪರ್ಕರಾಹಿತ್ಯ ಇಂಥ ಯಾವುದಾದರೂ ರುಜುವಾತು ಕೊಟ್ಟು ಅದನ್ನು ಅನೌರಸಸಂತಾನವೆಂದು ಸ್ಥಾಪಿಸಬಹುದಾಗಿದೆ. ಅನೌರಸಸಂತಾನವನ್ನು ಅನಂತರದ ಮದುವೆಯಿಂದ ಔರಸೀಕರಣಗೊಳಿಸಬಹುದೆಂಬ ತತ್ತ್ವವನ್ನು ಅಮೆರಿಕದಲ್ಲೂ ಮಾನ್ಯಮಾಡಲಾಗಿದೆ. ಮದುವೆಯಾಗದಿದ್ದರೂ ತಂದೆತನವನ್ನೊಪ್ಪಿಕೊಂಡು ಮಗುವನ್ನು ಔರಸಸಂತಾನವೆಂದು ಸ್ಥಾಪಿಸಬಹುದೆಂಬ ಕಾನೂನು ಅಮೆರಿಕದ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಒಮ್ಮೆ ಅನೌರಸವೆನಿಸಿಕೊಂಡಿದ್ದು ಆನಂತರ ಔರಸೀಕರಣವಾದ ಸಂತಾನಗಳ ವಾರಸು ಹಕ್ಕುಗಳನ್ನು ಪುರಸ್ಕರಿಸುವ ಕಾಯಿದೆಗಳೂ ಇವೆ.
ಔರಸೀಕರಣದ ಕ್ರಮ ಅನೌರಸ ಸಂತಾನದ ತಂದೆಯ ಖಾಯಂ ವಾಸಸ್ಥಳದ ಕಾಯಿದೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಔರಸೀಕರಣದ ವೇಳೆಯಲ್ಲಿಯ ವಾಸಸ್ಥಳದ್ದೇ ಪ್ರಾಮುಖ್ಯ. ಒಮ್ಮೆ ಅಲ್ಲಿಯ ಕಾಯಿದೆಯ ಪ್ರಕಾರ ಔರಸೀಕರಣವಾದಲ್ಲಿ ಮುಂದೆ ಆ ತಂದೆ ಯಾವ ದೇಶಕ್ಕೆ ವಾಸಸ್ಥಳವನ್ನು ಬದಲಾಯಿಸಿದರೂ ಔರಸೀಕರಣ ರದ್ದಾಗುವುದಿಲ್ಲ. ವಾಸಸ್ಥಳದ ಬದಲಾವಣೆಯಿಂದ ಒಮ್ಮೆ ಪಡೆದ ಔರಸೀಕರಣ ನಿರುಪಯೋಗಿ ಅಥವಾ ನಿರರ್ಥಕವಾಗುವುದಿಲ್ಲ. ಉದಾಹರಣಾರ್ಥವಾಗಿ, ತಂದೆತಾಯಿಗಳು ಮಗುವಿನ ಜನನದ ಅನಂತರ ಮದುವೆ ಮಾಡಿಕೊಂಡರೆ ಇಲ್ಲವೆ ಆಗಿರುವ ಅಧರ್ಮದ ಮದುವೆಗೆ ಮನ್ನಣೆ ಪಡೆದರೆ ಅಥವಾ ಅನೌರಸ ಸಂತಾನವನ್ನೂ ಔರಸೀಕರಣಗೊಳಿಸಿದರೆ ಅಂಥ ಸಂತಾನದ ಬದಲಾದ ಸ್ಥಿತಿ ತಂದೆಯ ವಾಸಸ್ಥಾನ ಬದಲಾದರೂ ಅಬಾಧಿತರಾಗಿ ಮುಂದುವರಿಯುತ್ತದೆ. ಔರಸೀಕರಣದ ಮೂಲಕ ಪ್ರಾಪ್ತವಾದ ಔರಸತ್ವ ತಂದೆಯ ವಾಸಸ್ಥಾನ ಅಥವಾ ಕಾಯಿದೆಯ ಬದಲಾವಣೆಯಿಂದ ನಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಔರಸೀಕರಣದಿಂದ ಸಂತಾನದ ಪರಿಸ್ಥಿತಿ ಬದಲಾಗುತ್ತದೆ. ಅಧರ್ಮ ಅಥವಾ ಅನೀತಿಯ ಸಂತಾನ ಔರಸೀಕರಣದಿಂದ ಧರ್ಮಸಂತಾನವೆಂದು ಪರಿಗಣಿತವಾಗುವುದಲ್ಲದೆ ಧರ್ಮಸಂತಾನಕ್ಕೆ ಸಲ್ಲಬೇಕಾದ ಸಾರ್ವಜನಿಕ, ಸಾಮಾಜಿಕ ಮತ್ತು ನ್ಯಾಯಸಮ್ಮತವಾದ ಎಲ್ಲ ಹಕ್ಕುಗಳೂ ಅದಕ್ಕೆ ಪ್ರಾಪ್ತವಾಗುತ್ತದೆ. ಅಂದರೆ ಇಂಥ ಸಂತಾನದ ಕಾನೂನು ಅಥವಾ ಸಾಮಾಜಿಕ ಸ್ಥಿತಿ ನೈಸರ್ಗಿಕ (ಜನಕ) ತಂದೆಯ ಔರಸಸಂತಾನದ ಸ್ಥಿತಿಯಂತೆ ಬದಲಾಗುವುದು. ಒಮ್ಮೆ ಒಂದು ಮಗುವಿನ ಔರಸೀಕರಣವಾದರೆ ಅದರ ಸ್ಥಿತಿ ಸರ್ವಕಾಲಿಕ, ಸಾರ್ವತ್ರಿಕ ಹಾಗೂ ಸರ್ವ ಉದ್ದೇಶಗಳಿಗಾಗಿ ಸ್ಥಾಪಿತವಾದ ಹಾಗೆ. ತಂದೆ ತೆಗೆದುಕೊಂಡ ಕ್ರಮದಿಂದ ಈ ಔರಸೀಕರಣ ಉಂಟಾಗಿದ್ದರೆ ಔರಸೀಕೃತ ಸಂತಾನ ವಾರಸುಹಕ್ಕು ಸಹಿತವಾಗಿ ಔರಸಸಂತಾನದ ಎಲ್ಲ ಹಕ್ಕುಗಳನ್ನೂ ಪಡೆಯುತ್ತದೆ. ಒಮ್ಮೆ ಔರಸೀಕರಣವಾದ ಮೇಲೆ ಆ ತಂದೆಗೆ ಔರಸೀಕರಣವನ್ನು ಅಲ್ಲಗಳೆಯಲು ಹಾಗೂ ತಾನು ಔರಸೀಕರಣಕ್ಕಾಗಿ ತೆಗೆದುಕೊಂಡ ಕ್ರಮ ತಪ್ಪು ಎನ್ನಲು ಮತ್ತು ಅಂಥ ಸಂತಾನ ಅನೌರಸವೆಂದು ಸಾಧಿಸಲು ಕಾಯಿದೆಯ ಪ್ರತಿಬಂಧಕವಿರುತ್ತದೆ. 

 ಅಂಥ ಮಗು ವಾರಸುಹಕ್ಕನ್ನು ಪಡೆಯುವುದಲ್ಲದೆ ಮುಂದಿನ ಸಂತತಿಗೆ ವಾರಸುಹಕ್ಕನ್ನು-ತನ್ನ ತಂದೆಯ ವಾರಸು ಹಕ್ಕು ಸಹಿತವಾಗಿ-ನೀಡಲು ಸಮರ್ಥವಾಗುತ್ತದೆ. ಇಂಥ ಕಾನೂನಿನ ಮೂಲಕ ಯಾವುದೇ ವ್ಯಕ್ತಿ ಔರಸನೆಂದು ಮನ್ನಿಸಲ್ಪಟ್ಟಿದ್ದರೆ ಮತ್ತು ಕೆಲವೊಂದು ಹಕ್ಕುಗಳಿಗೆ ಬಾಧ್ಯಸ್ಥನಾಗಿದ್ದರೆ ಇನ್ನೊಂದು ಕಾನೂನಿನ ಅರ್ಥ ಹಾಗೂ ಪರಿಣಾಮವನ್ನು ವಿಚಾರಿಸಬೇಕಾದಾಗ ಇಂಥ ಸಂತಾನ ಯಾವುದೇ ಸೂಚ್ಯಾರ್ಥದ ಮೂಲಕ, ವಾದದ ಮೂಲಕ ಇಲ್ಲವೇ ಅರ್ಥವಿವರಣೆಯ ಮೂಲಕ ಜಾರಜನೆಂದು ತಿಳಿಯಲಾಗದೆಂಬ ದೃಷ್ಟಿ ಬೆಳೆದು ಬಂದಿದೆ ಮತ್ತು ಆ ವ್ಯಕ್ತಿಗೆ ಪ್ರಾಪ್ತವಾದ ಹಕ್ಕುಗಳನ್ನು ಆ ವ್ಯಕ್ತಿ ಅನಂತರ, ಆದರೆ ಅವನ ತಂದೆಯ ಮರಣದ ಪುರ್ವದಲ್ಲಿ, ಕಾಯಿದೆಯಲ್ಲಿ ಉಂಟಾಗಬಹುದಾದ ಬದಲಾವಣೆಯ ಮೂಲಕ ಕಸಿದುಕೊಳ್ಳಬಾರದೆಂಬ ದೃಷ್ಟಿಯೂ ಬೆಳೆದು ಬಂದಿದೆ.

ವಾರಸುಹಕ್ಕಿನಿಂದ ಒಮ್ಮೆ ಔರಸಸಂತಾನಕ್ಕೆ ಬಂದ ಆಸ್ತಿ ಅದರ ಅನಂತರದಲ್ಲಿ ಔರಸೀಕೃತವಾದ ಜಾರಜನಿಗೆ ಸಲ್ಲತಕ್ಕದ್ದಲ್ಲ.
ಜಾರಜಸಂತಾನವನ್ನು ಔರಸೀಕರಣ ಮಾಡುವುದಕ್ಕಾಗಿ ಹಿಂದೂ ಕಾಯಿದೆ ಯಾವ ನಿಯಮಗಳನ್ನೂ ಮಾಡಿದಂತೆ ಕಾಣುವುದಿಲ್ಲ. ದ್ವಿಜರಲ್ಲಿ ಜಾರಜರಿಗೆ ವಾರಸುಹಕ್ಕು ಪ್ರಾಪ್ತವಾಗುವುದಿಲ್ಲ. ಆದರೆ ಹಿಂದೂ ಕಾಯಿದೆ ದಾಸೀಪುತ್ರ-ಖಾಯಂ ಆಗಿ ಇಟ್ಟುಕೊಂಡವಳ (ಅವಿರುದ್ಧ ಸ್ತ್ರೀ) ಮಗು-ಮತ್ತು ಜಾರಜತನದಿಂದ ಹುಟ್ಟಿದ ಮಗು ಅಂತರವನ್ನು ಪರಿಗಣಿಸುತ್ತದೆ. ಮೇಲೆ ಕೆಲವೊಂದು ಹಕ್ಕುಗಳನ್ನು ಹಿಂದೂ ಕಾಯಿದೆ ಕಲ್ಪಿಸಿದೆ; ಮತ್ತು ಅವನ್ನು ಕಾನೂನಿನಿಂದ ಸ್ಥಾಪಿಸಿಕೊಳ್ಳಲು ಅವಕಾಶವಿದೆ. ಇಂಥ ಸಂತಾನಕ್ಕೆ ಅವಿಭಾಜ್ಯ ಹಿಂದೂ ಸಂಸಾರದಲ್ಲಿ ಯಾವ ಸ್ಥಾನವೂ ಇಲ್ಲದಿದ್ದಾಗ್ಯೂ ಅವನ ಜೀವಮಾನದವರೆಗೆ ಜೀವನಾಂಶ ಅಥವಾ ಪೋಟಗಿ ಪಡೆಯುವ ಹಕ್ಕನ್ನು ಮಾನ್ಯ ಮಾಡಲಾಗಿದೆ ಮತ್ತು ದ್ವಿಜರಲ್ಲದವರಲ್ಲಿ ಜಾರಜನಿಗೂ ಕೂಡ-ಅವನು ದಾಸೀಪುತ್ರನಾಗಿದ್ದರೆ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕಿದೆ. ಆದರೆ ಅವನಿಗೆ ಬರುವ ಪಾಲು ಔರಸನಿಗೆ ಬರುವ ಪಾಲಿಗೆ ಸಮವಾಗಿರಬಹುದು. 1956ರ ಹಿಂದೂ ದತ್ತಕ ಹಾಗೂ ಜೀವನಾಂಶ ಕಾಯಿದೆಯ ಕಲಮು 20ರ ಪ್ರಕಾರ ಹಿಂದೂ ತಂದೆ ಇಲ್ಲವೆ ತಾಯಿ ತನ್ನ ಜೀವಮಾನದವರೆಗೆ ತನ್ನ ಜಾರಜ ಸಂತಾನವನ್ನು ಪೋಷಣೆ ಮಾಡುವ ಜವಾಬ್ದಾರಿ ಇರುತ್ತದೆ. ಮತ್ತು ಜಾರಜ ತಾನು ಅವಯಸ್ಕನಾಗಿರುವಷ್ಟು ಕಾಲ ತನ್ನ ತಂದೆ ಇಲ್ಲವೆ ತಾಯಿಯಿಂದ ಪೋಟಗಿ ಪಡೆಯಲು ಅಧಿಕಾರ ಉಳ್ಳವನಾಗಿರುತ್ತಾನೆ. ಜಾರಜರ ಜೀವನಾಂಶದ ಹಕ್ಕು ಅವರ ವೈಯಕ್ತಿಕ ಹಕ್ಕಾಗಿದ್ದು ಅವರ ಮರಣದ ಅನಂತರ ಅವರ ಸಂತತಿಗೆ ಉತ್ತರಾಧಿಕಾರ ಕ್ರಮದಿಂದ ಮುಂದುವರಿಯುವುದಿಲ್ಲ.

ಅಂಗೀಕಾರ ಮಾಡುವುದರ ಮೂಲಕ ಜಾರಜಸಂತಾನವನ್ನು ಔರಸವೆಂದು ಪರಿಗಣಿಸುವ ನಿಯಮ ಮಹಮ್ಮದೀಯರ ಕಾಯಿದೆಯಲ್ಲಿದೆ. ಈ ಅಂಗೀಕಾರ ಪದ್ಧತಿಯಿಂದ ವಾರಸುಹಕ್ಕೂ ಪ್ರಾಪ್ತವಾಗುತ್ತದೆ. ಅಂಗೀಕಾರ ಪ್ರಕಟವಾಗಿರಬಹುದು ಇಲ್ಲವೆ ಸೂಚ್ಯವಾಗಿರಬಹುದು. ಒಬ್ಬ ಒಂದು ಮಗುವನ್ನು ನಿರಾತಂಕವಾಗಿ ಹಾಗೂ ಬಹಿರಂಗವಾಗಿ ಔರಸಂತಾನವೆಂದು ಪರಿಗಣಿಸಿದರೆ ಆ ಮೂಲಕ ಅವನನ್ನು ಔರಸಸಂತಾನವೆಂದು ಅಂಗೀಕರಿಸಿದಂತೆಂದು ತಿಳಿಯಬೇಕು. ಅಂಗೀಕಾರದಿಂದ ವಾರಸುಹಕ್ಕು ನೀಡಿದಂತೆ. ಒಮ್ಮೆ ಅಂಗೀಕಾರವಾದ ಮೇಲೆ ಅದನ್ನು ರದ್ದುಪಡಿಸಲು ಅಥವಾ ಮುರಿದುಕೊಳ್ಳಲು ಕಾಯಿದೆಯಿಂದ ಅವಕಾಶವಿಲ್ಲ.	(ಎಂ.ಕೆ.ಎಸ್.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ